ತಾಂತ್ರಿಕ ಸಾಧನೆಗೆ ಸಂಬಂಧಪಟ್ಟಿದ್ದು, ಹಠಯೋಗಕ್ಕೆ ಆಧಾರಪ್ರಾಯವಾಗಿರುವ ಒಂದು ಗ್ರಂಥ. ಘೇರಂಡ ಮಹರ್ಷಿ ತನ್ನ ಶಿಷ್ಯನಾದ ಚಂಡಕಾಪಾಲಿಗೆ ಯೋಗಾಭ್ಯಾಸದ ವಿಷಯವಾಗಿ ನೀಡಿದ 7 ಉಪದೇಶಗಳು ಏಳು ಅಧ್ಯಾಯಗಳ ರೂಪದಲ್ಲಿ ಘೇರಂಡಸಂಹಿತೆ ಎಂಬುದಾಗಿ ಪ್ರಸಿದ್ಧವಾಗಿದೆ. ಇಷ್ಟಿದ್ದರೂ ಗ್ರಂಥ ಚಿಕ್ಕದು. ಇದರಲ್ಲಿ ಒಟ್ಟು 350 ಶ್ಲೋಕಗಳಿವೆ.

ಮೊದಲನೆಯ ಅಧ್ಯಾಯದಲ್ಲಿ ಷಟ್ಕರ್ಮಗಳ ವಿಷಯ; ಎರಡನೆಯ ಅಧ್ಯಾಯದಲ್ಲಿ ಸಿದ್ಧಾಸನ, ಪದ್ಮಾಸನ, ಭದ್ರಾಸನ, ಉಷ್ಟ್ರಾಸನ, ಭುಜಂಗಾಸನ ಇತ್ಯಾದಿಯಾದ ವಿವಿಧ ಆಸನಗಳ ನಿರೂಪಣೆ; ಮೂರನೆಯ ಅಧ್ಯಾಯದಲ್ಲಿ, ಮಹಾಮುದ್ರಾ, ನಭೋಮುದ್ರಾ, ಖೇಚರೀಮುದ್ರಾ, ಭುಜಂಗಿನೀ ಮುದ್ರಾ, ಇತ್ಯಾದಿಯಾದ ವಿವಿಧ ಯೋಗಮುದ್ರೆಗಳ ಸ್ವರೂಪ, ಲಕ್ಷಣ ಮತ್ತು ಉಪಯೋಗ; ನಾಲ್ಕನೆಯ ಅಧ್ಯಾಯದಲ್ಲಿ ಅರಿಷಡ್ವರ್ಗಗಳನ್ನು ಜಯಿಸಿ ಆತ್ಮವನ್ನು ವಶಮಾಡಿಕೊಳ್ಳಲು ಅನುಕೂಲವಾದ ಪ್ರತ್ಯಾಹಾರ ಮಾರ್ಗ; ಐದನೆಯ ಅಧ್ಯಾಯದಲ್ಲಿ ಸ್ಥಾನನಿರ್ಣಯ, ಕಾಲನಿರ್ಣಯ, ಮಿತಾಹಾರ, ನಾಡೀಶುದ್ಧಿ, ಪ್ರಾಣಾಯಾಮವಿಧಿ ಇತ್ಯಾದಿ; ಆರನೆಯ ಅಧ್ಯಾಯದಲ್ಲಿ ಸ್ಥೂಲ ಧ್ಯಾನ, ಜ್ಯೋತಿರ್ಮಯ ಧ್ಯಾನ, ಸೂಕ್ಷ್ಮ ಧ್ಯಾನ ಇತ್ಯಾದಿಯಾದ ವಿವಿಧ ಧ್ಯಾನರೀತಿಗಳು; 7ನೆಯ ಅಧ್ಯಾಯದಲ್ಲಿ ಸಮಾಧಿಯೋಗ, ಅದರಲ್ಲಿರುವ ವಿವಿಧ ಭೇದಗಳು ಅಂದರೆ ಧ್ಯಾನಯೋಗಸಮಾಧಿ, ನಾದಯೋಗಸಮಾಧಿ, ರಸಾನಂದಯೋಗಸಮಾಧಿ, ಲಯಸಿದ್ಧಿಯೋಗಸಮಾಧಿ, ಭಕ್ತಿಯೋಗಸಮಾಧಿ, ರಾಜಯೋಗಸಮಾಧಿ ಇತ್ಯಾದಿಗಳು ಬರುತ್ತವೆ.

ಹಠಯೋಗದ ಮೇಲೆ ಇರುವ ಹಠಯೋಗಪ್ರದೀಪಿಕಾ, ಗೋರಕ್ಷಪದ್ಧತಿ, ಶಿವಸಂಹಿತಾ ಇತ್ಯಾದಿಯಾದ ಅನೇಕ ಗ್ರಂಥಗಳಿಗಿಂತಲೂ ವಿಶೇಷವಾಗಿ ಘೇರಂಡಸಂಹಿತೆ ಹಠಯೋಗದ ಕ್ರಿಯಾಪಾದವನ್ನು ವಿಶದವಾಗಿ ವಿವರಿಸುತ್ತದೆ. ಇಲ್ಲಿನ ಶ್ಲೋಕಗಳು ಅತಿ ಸರಳವಾಗಿವೆ. ಇಲ್ಲಿನ ಆಜ್ಞಾಚಕ್ರದಲ್ಲಿ ಪ್ರಣವಧ್ಯಾನ ಅಜಿಪಾಜಪ ಇತ್ಯಾದಿ ತತ್ತ್ವಗಳು ವಿಶೇಷವಾಗಿ ಪ್ರತಿಪಾದಿತವಾಗಿವೆ. ಇಲ್ಲಿನ ಹಠಯೋಗವು ರಾಜಯೋಗದಲ್ಲಿ ಪರ್ಯವಸಾನವಾಗುತ್ತದೆ. ಪಾತಂಜಲಿಯೋಗದರ್ಶನದ ರಾಜಯೋಗಕ್ಕೂ ಇಲ್ಲಿನ ರಾಜಯೋಗಕ್ಕೂ ಮುಖ್ಯವಾದ ವ್ಯತ್ಯಾಸವೊಂದಿದೆ. ಆತನದು ದ್ವೈತವಾದವಾದರೆ ಇಲ್ಲಿನದು ಅದ್ವೈತವಾದ. (ಆರ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ